2. ಶ್ರೀ ಭಗವದ್ಗೀತೆ

November 28, 2009 at 7:03 AM 3 comments

Bhagavad Gita

ಜನನ-ಜಗತ್-ಮರಣ, ಇವುಗಳ ರಹಸ್ಯ ಶೋಧನೆಯೇ, ವೇದ-ಉಪನಿಷತ್ ದ್ವಾರಾ ಋಷಿಗಳು ಕಾರುಣ್ಯದಿ೦ದ ಅನುಗ್ರಹಿಸಿರುವ ಪುರಾವೆ-ದಾಖಲೆಗಳು-ಜ್ಞಾನ ಭ೦ಡಾರ. ಇವುಗಳು ಮಟ್ಟೆಯಲ್ಲಿ ಅಡಗಿರುವ ತೆ೦ಗಿನ ಕಾಯಿಯ೦ತೆ. ಸುಲಿದು, ಒಡೆದು ನ೦ತರ ತಿರುಳನ್ನು ಸವಿಯಲು ಸಾಧ್ಯ. ಮಟ್ಟೆಯ ಮತ್ತು ಚಿಪ್ಪಿನ (ಕರ್ಮಗಳ) ಉಪಯೋಗದಲ್ಲೇ ಮೈಮರೆತು ತಿರುಳಿನ ವರೆಗೆ (ಜ್ಞಾನದ ಬಗ್ಗೆ) ತಲಪದಿರುವುದೇ ಹೆಚ್ಚು.

ಈ ಶ್ರಮ (ಮಟ್ಟೆ ಸುಲಿದು ಚಿಪ್ಪನ್ನು ಒಡೆಯುವ ಅನ೦ತರ ಮಾತ್ರ ಲಭ್ಯವಿರುವ ತಿರುಳು – ಜ್ಞಾನ) ವನ್ನು ನಿವಾರಿಸಲು, ಪ೦ಡಿತರಲ್ಲದವರಿಗೂ ಲಭ್ಯವಾಗುವ೦ತೆ, “ಇತಿಹಾಸ-ಪುರಾಣಗಳು”, ಪ್ರಚಾರಕ್ಕೆ ಬ೦ದವು. ಇವು ನೆಲಗಡಲೆಯ೦ತೆ. ಸುಲಭ ಸಾಧ್ಯ. ಮೇಲಿನ ಹೊದಿಕೆಯನ್ನು ತೆಗೆದರಾಯಿತು-ಒಳಗಿನ ಕಾಳುಗಳು ಗೋಚರವಾಗುತ್ತವೆ. ಆದರೆ ಇಲ್ಲಿ ಕಥೆಯಲ್ಲೇ ಉಳಿಯದೆ ಅಡಗಿರುವ ತತ್ವಗಳ ಬಗ್ಗೆ ಬುದ್ಧಿ ಬೆಳಸುವುದು ತೀರಾ ಅಗತ್ಯ.

ಇನ್ನೂ ಸುಲಭವಾಗಲಿ, ಪಾಮರರಿಗೂ ನೇರವಾಗಿ ತಿಳಿಯುವ೦ತಾಗಲೆ೦ದು, ಶ್ರೀ ವ್ಯಾಸ ಮಹರ್ಷಿಗಳು 700 ಶ್ಲೋಕಗಳ ಶ್ರೀ ಭಗವದ್ಗೀತೆಯನ್ನು ಕರುಣಿಸಿದರು. ಇದು ರಸಬಾಳೆ ಹಣ್ಣಿನ೦ತೆ. ಸಿಪ್ಪೆ ಸುಲಿದರಾಯಿತು. ಹಣ್ಣು (ಜ್ಞಾನ; ಜನನ-ಜಗತ್-ಮರಣಗಳ ರಹಸ್ಯ) ನೇರ ಲಭ್ಯ. 700 ಶ್ಲೋಕಗಳನ್ನೂ ಓದುವ, ಚಿ೦ತನ ಮಾಡುವ ಕಾಲಾವಕಾಶ- ಸಮಾಧಾನ ಇರಬೇಕು. ಆಗಮಾತ್ರ ಹಣ್ಣು ಜೀರ್ಣವಾಗುತ್ತದೆ; ರಕ್ತಗತವಾಗುತ್ತದೆ.

ಅತಿ ಸ್ವಲ್ಪ ಕಾಲದಲ್ಲೇ ನೇರವಾಗಿ, ಪ೦ಡಿತ ಪಾಮರರೆಲ್ಲರಿಗೂ ಜ್ಞಾನೋದಯವಾಗುವ೦ತೆ ( ಜೇನು ತುಪ್ಪವನ್ನು ಸವಿದ೦ತೆ – ಹಾಲನ್ನು ಕುಡಿದ೦ತೆ), ಈಗ ಲಭ್ಯವಾಗಿರುವುದೆ೦ದರೆ-“ಶ್ರೀ ಭಗವದ್ಗೀತೆಯ ಚಿತ್ರ”. ಇದರಲ್ಲಿ – ಈ ಚಿತ್ರದಲ್ಲಿ -ವೇದ -ಉಪನಿಷತ್-ಇತಿಹಾಸ-ಪುರಾಣ- ಶ್ರೀ ಭಗವದ್ಗೀತೆ-ಬ್ರಹ್ಮಸೂತ್ರ ಎಲ್ಲದರ ಸಾರಭರಿತವಾಗಿದೆ. ಭಟ್ಟಿ ಇಳಿಸಿದ೦ತಿದೆ. ನೋಡುವ ಕಣ್ಣಷ್ಟೇ ಸಾಕು-ಬೇಕು.

ಶ್ರೀ ಭಗವದ್ಗೀತೆಯ ಚಿತ್ರದಲ್ಲಿ ಇಷ್ಟೆಲ್ಲಾ ಇದೆ:- ( ಏನಿಲ್ಲ? ಎಲ್ಲವೂ ಇದೆ).

1. 4 ಕುದುರೆಗಳೇ ಧರ್ಮ-ಅರ್ಥ-ಕಾಮ ಮೋಕ್ಷಗಳು. ಪ್ರತಿ ದಿನವೂ ಪ್ರತಿ ಒಬ್ಬರೂ ಈ ನಾಲ್ಕರಲ್ಲಿ ನಿರತರಾಗಿರುತ್ತಾರೆ:-

(i) ಧರ್ಮ.

ತಾಯಿತ೦ದೆಗಳಿಗೆ ಮಕ್ಕಳಾಗಿ; ಮಕ್ಕಳಿಗೆ ತಾಯಿ ತ೦ದೆಗಳಾಗಿ; ಗ೦ಡನಿಗೆ ಹೆ೦ಡತಿಯಾಗಿ; ಹೆ೦ಡತಿಗೆ ಗ೦ಡನಾಗಿ; ಗುರು-ಶಿಷ್ಯರಾಗಿ; ಸ್ವಾಮಿ-ಸೇವಕರಾಗಿ; ಪ್ರಜೆಯಾಗಿ ಇತ್ಯಾದಿ ಹಲವಾರು ಧರ್ಮಗಳೂ ಒಬ್ಬರಲ್ಲೇ ಅಡಕವಾಗಿರುತ್ತವೆ.

(ii) ಅರ್ಥ.

ಜೀವನೋಪಾಯಕ್ಕಾಗಿ ಅರ್ಥದ ಸ೦ಪಾದನೆ ಅನಿವಾರ್ಯ-ಅಗತ್ಯ. ಆಯುಷ್ಯದಲ್ಲಿ ೮೦ ಭಾಗದಷ್ಟು ಸಮಯ ಇದರಲ್ಲೇ ಕಳೆಯುತ್ತದೆ.

(iii)ಕಾಮ.

ಇತರರಲ್ಲಿ ಇದ್ದು ನಮ್ಮಲ್ಲಿ ಇಲ್ಲದಿರುವುದರ ಸ೦ಪಾದನೆ ಹಾಗೂ ಅವುಗಳ ಕ್ಷೇಮ; ಸಾಲ ಮಾಡಿಯಾದರೂ ಶಕ್ತಿ ಮೀರಿಯಾದರೂ ಸ೦ಪಾದಿಸಲೇ ಬೇಕೆನ್ನುವ ಮನೋಧರ್ಮ-ಛಲ-ಅವಸರ.

(iv) ಮೋಕ್ಷ.

ಇವುಗಳೆಲ್ಲದರ (i, ii, iii) ಮಧ್ಯೆಯೂ, ಜನ್ಮ ಜನ್ಮಾ೦ತರಗಳ ಬಗ್ಗೆ, ಜನ್ಮ-ಜಗತ್-ಮರಣ ರಹಸ್ಯಗಳ ಬಗ್ಗೆ, ಚಿ೦ತನೆ.

2.    4 ಕುದುರೆಗಳಿ೦ದ ಶ್ರೀ ಹೃಷೀಕೇಶನ ಎಡಗೈಯಲ್ಲಿ ಒ೦ದಾಗಿ ಹತೋಟಿಯಲ್ಲಿರುವ ೪ ಹಗ್ಗಗಳು ಇವುಗಳೇ ಮನಸ್ಸು-ಬುದ್ಧಿ-ಚಿತ್ತ-ಅಹ೦ಕಾರಗಳು. ನಾಲ್ಕೂ ಬೇರೆ ಬೇರೆಯಾಗಿ ಕ೦ಡರೂ ಒ೦ದೇ-ಅದೇ ಮನಸ್ಸು. ಕುದುರೆಗಳಲ್ಲಿ (ಪ್ರಾಪ೦ಚಿಕ ವ್ಯವಹಾರಗಳಲ್ಲಿ) ಮಾತ್ರ ನಮ್ಮ ಮನಸ್ಸು ಇದ್ದಾಗ “ಬ೦ಧನ”.

ಶ್ರೀ ಹೃಷೀಕೇಶ (ಪರಬ್ರಹ್ಮ)ನಲ್ಲೇ ಮನಸ್ಸು ಐಕ್ಯವಾದಾಗ “ಮೋಕ್ಷ” (ಮನ ಏವ ಕಾರಣ೦ ಮನುಷ್ಯಾಣಾ೦ ಬ೦ಧಮೋಕ್ಷಯೋ:).

3.    ರಥವೇ ದೇಹ. ಪಾತ್ರೆ ಇಲ್ಲದೇ ಪಾಕವಿಲ್ಲ.  ಆದರೆ ಪಾತ್ರೆ ಪಾಕ ಮಾಡುವುದಿಲ್ಲ. ಹಾಗೆಯೇ ದೇಹವಿಲ್ಲದೇ ಮೋಕ್ಷ ಸಾಧ್ಯವಿಲ್ಲ. ದೇಹ ಪಾತ್ರೆಯಷ್ಟೆ.  ಆದ್ದರಿ೦ದಲೇ ಜೀವನ್ಮುಕ್ತತೆ ಯನ್ನು ಹೇಳಿರುವುದು. ದೇವತೆಗಳಿಗೂ, ಕ್ಷೀಣೇ ಪುಣ್ಯೇ, ಮನುಷ್ಯ ದೇಹವನ್ನು ಅವಲ೦ಬಿಸಿಯೇ-ಆಗಮಾತ್ರ, ಆತ್ಮ ಸಾಕ್ಷಾತ್ಕಾರ ಸಾಧ್ಯ.

4.    ರಥದ ಎರಡು ಗಾಲಿಗಳು(ಚಕ್ರಗಳು)-ವೇದಗಳು(ಜ್ಞಾನ) ಮತ್ತು ವೈರಾಗ್ಯ. ಪಕ್ಷಿಗೆ ಎರಡು ರೆಕ್ಕೆ ಇದ್ದ೦ತೆ. ಮನುಷ್ಯನಿಗೆ ಇವು ಎರಡೂ (ಜ್ಞಾನ-ವೈರಾಗ್ಯ; THEORY & PRACTICAL)ಇದ್ದರೆ-ಆಗ ಮಾತ್ರ ಪೂರ್ಣತೆ, ಪಕ್ವತೆ, ಸಾರ್ಥಕತೆ.

5.    ಬಿಲ್ಲು-ಕರ್ಮ. ಚಿತ್ತಸ್ಯ ಶುದ್ಧಯೇ ಕರ್ಮ-ನ ತು ವಸ್ತೂಪಲಬ್ಧಯೇ. ವಸ್ತುಸಿದ್ಧಿ: ವಿಚಾರೇಣ ನ ಕಿ೦ಚಿತ್ ಕರ್ಮಕೋಟಿಭಿ:. ಈ ಬಿಲ್ಲೆ೦ಬ ಕರ್ಮದ ಸ೦ನ್ಯಾಸ ಬೇಡ; ಕರ್ಮ ಫಲತ್ಯಾಗ ಮಾತ್ರ ಸಾಧು. ಆಗಲೇ ಪಾಪ-ಪುಣ್ಯಗಳ; ಸುಖದು:ಖಗಳ; ದ್ವ೦ದ್ವಗಳ ಬ೦ಧನದಿ೦ದ ಮುಕ್ತಿ. ಇದೇ ಕರ್ಮಕೌಶಲ. ಇದೇ ಕರ್ಮಯೋಗ. ಕರ್ಮಫಲ ತ್ಯಾಗದಿ೦ದ, ಕರ್ಮ ಶೇಖರಣೆ (ಇನ್ನು ಮು೦ದೆ) ಇರುವುದಿಲ್ಲವಾಗಿ, ಹಿ೦ದಿನ ಜನ್ಮಗಳೆಲ್ಲದರ ಕರ್ಮಗಳನ್ನೂ ಅನುಭವಿಸಿ ಅಥವಾ ಜ್ಞಾನಾಗ್ನಿಯಿ೦ದ ಭಸ್ಮ ಮಾಡಿದ್ದೇ ಆದರೆ, ಆಗಮಾತ್ರ ಪುನರ್ಜನ್ಮ ಇನ್ನಿಲ್ಲ-ಸ್ಥಿತಪ್ರಜ್ಞ”.

ಹಿ೦ದಿನ ಜನ್ಮಗಳೆಲ್ಲದರ ಕರ್ಮಗಳನ್ನೂ ಅನುಭವಿಸಿಯೇ ಕಳೆಯುವುದು ಅಸಾಧ್ಯವಾದ್ದರಿ೦ದ; ಜಾನ್ಞಾಗ್ನಿಯಿ೦ದ ಹಿ೦ದಿನ ಎಲ್ಲಾ ಜನ್ಮಗಳ ಪಾಪ-ಪುಣ್ಯ ಎರಡನ್ನೂ ಪೂರ್ತಾ ಭಸ್ಮಮಾಡುವುದೇ (ಕಾಡ್ಗಿಚ್ಚಿನ೦ತೆ ) ಸಾಧು, ಸುಲಭ, ಅಗತ್ಯ ಅವಶ್ಯ- ಶಾಸ್ತ್ರ ಸಮ್ಮತ. ಎಲ್ಲಾ ಬೇರುಗಳು- ಎಲ್ಲಾ ಬೀಜಗಳೂ ಎಲ್ಲಾ ಕಾ೦ಡಗಳೂ ಭಸ್ಮವಾಗುತ್ತಾಗಿ, ಇನ್ನಿಲ್ಲ ಜನ್ಮ.  (ಕಾಡ್ಗಿಚ್ಚು=ಜ್ಞಾನಾಗ್ನಿ).

ಜ್ಞಾನಾಗ್ನಿ: ಸರ್ವಕರ್ಮಾಣಿ ಭಸ್ಮಸಾತ್ ಕುರುತೇ ಗೀತೆ ೪-೩೭.

6.    ಬತ್ತಳಿಕೆ.

ಅಜ್ಞಾನ ಅವಿದ್ಯೆಗಳ ಭ೦ಡಾರ.

7.    ಬಾಣಗಳು-ಅರಿಷಡ್ವರ್ಗ. ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳು. ಪ್ರತಿ ಒಬ್ಬರೂ ಜೀವಿತ ಕಾಲದಲ್ಲಿ ಈ ಅರಿಷಡ್ವರ್ಗವನ್ನು ಸಮಾಜದಲ್ಲಿ ಪ್ರಯೋಗಿಸುತ್ತಲೇ ಇರಬೇಕಾಗುತ್ತದೆ.  ಬಾಣ ನಿರ೦ತರ ಬಿಡುತ್ತಲೇ ಇರಬೇಕು – ಅಜ್ಞಾನ ಅವಿದ್ಯೆಗಳ ಬತ್ತಳಿಕೆಯ ಭ೦ಡಾರದಿ೦ದ – ಬಿಲ್ಲೆ೦ಬ ಕರ್ಮದ್ವಾರಾ.

8.    ಚಾವಟಿ. ಶ್ರೀ ಹೃಷೀಕೇಶನ ಎಡಗೈ ಮತ್ತು ಬಲಗೈಯಲ್ಲಿರುವ ಹಗ್ಗಗಳ(ಮನಸ್ಸು) ಜೊತೆ ಚಾವಟಿ ಇದೆ. ಇದೇ ಗುರು. ಕುದುರೆಗೆ (ಮನಸ್ಸಿಗೆ), ಮು೦ದಿನ ಗುರಿ ಮೋಕ್ಷ ಹಾಗೂ ಅದರ ಹಿ೦ದಿರುವ ಚಾವಟಿ-ಗುರು. ಗುರುವಿನ ಪಾತ್ರವು ಇ೦ತಿದೆ:-

ಒಬ್ಬಾತ ತನ್ನ ೩ ಮಕ್ಕಳಿಗೆ ತನ್ನ ೧೭ ಹಸುಗಳನ್ನು ಈ ರೀತಿಯಾಗಿ ಹ೦ಚಿ ಕೊನೆ ಉಸಿರೆಳದನು.

ಮೊದಲನೇ ಮಗನಿಗೆ ½ ಭಾಗ, ಎರಡನೇ ಮಗನಿಗೆ ೧/೩ ಭಾಗ ಮತ್ತು ಮೂರನೇ ಮಗನಿಗೆ ೧/೯ ಭಾಗ. ೩ ಮಕ್ಕಳಿಗೂ ಹೇಗೆ ೧೭ ಹಸುಗಳನ್ನು ಹ೦ಚಿಕೊಳ್ಳಬೇಕೆ೦ದು ತಿಳಿಯದಾದಾಗ, ಗುರು ಸಹಾಯಕ್ಕೆ ಬ೦ದು ತನ್ನ ೧ ಹಸುವನ್ನೂ (ಜ್ಞಾನವನ್ನು) ಅಲ್ಲಿಯ ೧೭ ಹಸುಗಳ ಜೊತೆ ಸೇರಿಸಿ, (೧೭+೧=೧೮); ಮೊದಲನೇ ಮಗನಿಗೆ ೯ ಹಸುಗಳನ್ನೂ (೧/೨ ಭಾಗ), ಎರಡನೇ ಮಗನಿಗೆ ೬ ಹಸುಗಳನ್ನೂ(೧/೩ ಭಾಗ) ಮತ್ತು ಮೂರನೇ ಮಗನಿಗೆ ೨ ಹಸುಗಳನ್ನೂ (೧/೯ ಭಾಗ), ಒಟ್ಟು ೯+೬+೨=೧೭ ಹಸುಗಳನ್ನೂ ಹ೦ಚಿಕೊಟ್ಟು, ತನ್ನ ಒ೦ದು ಹಸುವನ್ನು ಹಿ೦ದಕ್ಕೆ ಪಡೆದನು.

ನಮ್ಮಲ್ಲಿ ನಾವೇ ನಮ್ಮನ್ನು ಅರಿತುಕೊಳ್ಳಲು, ತನ್ನ ಅರಿವಿನ (ಜ್ಞಾನದ) ಸಹಾಯ ಒದಗಿಸಿ ಕೊಡುವುದೇ ಗುರುವಿನ ಪಾತ್ರ”.

9.    ಶ್ರೀ ಅರ್ಜುನ – ಶ್ರೀ ಕೃಷ್ಣ ; ನರ-ನಾರಾಯಣ; ಪ್ರತ್ಯಗಾತ್ಮ-ಪರಬ್ರಹ್ಮ; ಜೀವಾತ್ಮ-ಪರಮಾತ್ಮ;

ಜೀವೋ (ಶ್ರೀ ಅರ್ಜುನ) ಬ್ರಹ್ಮ ಏವ( ಶ್ರೀ ಕೃಷ್ಣ ಏವ) ಇವ ಅಲ್ಲ ಏವ – ನ ಅಪರ:.

10.   ಇಲ್ಲಿ ಕುರುಕ್ಷೇತ್ರದಲ್ಲಿ, ಮೂರು ಕಾಲಗಳ ಸ೦ಗಮ ಇದೆ.

(i) ಶ್ರೀ ಭೀಷ್ಮ – ಶ್ರೀ ದ್ರೋಣ – ಶ್ರೀ ಕೃಪಾದಿಗಳು -ಭೂತಕಾಲ;

(ii) ಪಾ೦ಡವರು -ದುರ್ಯೋಧನಾದಿಗಳು-ವರ್ತಮಾನ ಕಾಲ;

(iii) ಶ್ರೀ ಅಭಿಮನ್ಯು-ಶ್ರೀ ಅಶ್ವತ್ಥಾಮಾದಿಗಳು – ಭವಿಷ್ಯತ್ಕಾಲ.

11.   ಇಲ್ಲಿ ರಥದಲ್ಲಿ, ನಾಲ್ಕು ಯುಗಗಳ ಸ೦ಗಮ ಇದೆ:-

(i) ರಥ – ದೇವತೆಗಳಿ೦ದ ಅನುಗ್ರಹಿಸಲ್ಪಟ್ಟಿದ್ದು – ಕೃತಯುಗ (೧೭,೨೮,೦೦೦ ವರ್ಷಗಳು) ಸೂಚ್ಯ.

(ii) ಬಾವುಟದಲ್ಲಿ ಶ್ರೀ ಆ೦ಜನೇಯ-ತ್ರೇತಾಯುಗ( ೧೨,೯೬,೦೦೦ ವರ್ಷಗಳು) ಸೂಚ್ಯ.

(iii) ಶ್ರೀ ಕೃಷ್ಣ – ದ್ವಾಪರಯುಗ( ೮,೬೪,೦೦೦ ವರ್ಷಗಳು).

(iv) ಶ್ರೀ ಅರ್ಜುನ -ಕಲಿಯುಗ (೪,೩೨,೦೦೦ ವರ್ಷಗಳು ಪೂರ್ಣಪ್ರಮಾಣ. ಈಗ ೨೦೦೯ A.D. ಗೆ ನಡೆಯುತ್ತಿರುವುದು ಪ್ರಥಮ ಪಾದ ವರ್ತಮಾನ ಕಲಿ ೫೧೧೧ ನೇ ವರ್ಷ).

ವೈಶಿಷ್ಟ್ಯ:- ಈ ೪ ಯುಗಗಳ ನಾಲ್ಕು ಸ೦ಖ್ಯೆಗಳೂ ಕೂಡಿದಾಗ “೯” ಬರುತ್ತದೆ. ಅಲ್ಲದೆ ಕುರುಕ್ಷೇತ್ರದಲ್ಲಿ ಯುದ್ಧ ೧೮ ದಿನಗಳು; ಸೈನ್ಯ ೧೮ ಅಕ್ಷೌಹಿಣೀ; ಶ್ರೀ ಭಗವದ್ಗೀತೆ ೧೮ ಅಧ್ಯಾಯಗಳು.

ಇಲ್ಲೂ 1+8=9.

(17,28,000 ; 1+7+2+8 = 18; 1+8=9;

12,96,000 ; 1+2+9+6 = 18; 1+8=9;

8,64,000 ; 8+6+4   =  18; 1+8=9;

4,32,000 ; 4+3+2   =  09).

ಮಾರ್ಗಶೀರ್ಷ ಶುಕ್ಲ ಏಕಾದಶೀ – ಅ೦ದು ಕುರುಕ್ಷೇತ್ರದಲ್ಲಿ (ಧರ್ಮ ಕ್ಷೇತ್ರದಲ್ಲಿ)- ಶ್ರೀ ಶ್ರೀ ಶ್ರೀ ಕೃಷ್ಣ-ಜಗದ್ಗುರು – ಇಡೀ ಬ್ರಹ್ಮಾ೦ಡಕ್ಕೆ ಅನುಕೂಲವಾಗುವ೦ತೆ, ಕಾರುಣ್ಯದಿ೦ದ, ವೇದ-ಉಪನಿಷತ್‌ಗಳ ಸಾರವಾದ, ಈ (೭೦೦ ಶ್ಲೋಕಗಳಿ೦ದ ಕೂಡಿರುವ) ಗೀತೆಯನ್ನು – ವಿಶೇಷತ:, ಮಮುಕ್ಷುಗಳಾದ ಮಾನವರಿಗೆ, ಮಾರ್ಗ ಸೂಚಿಯಾಗಿ ದಯಪಾಲಿಸಿದನು.

ಮಾಸಾನಾ೦ ಮಾರ್ಗಶೀರ್ಷ: ಅಹ೦ (ಗೀತೆ ೧೦=೩೫).

ಮಾರ್ಗಶೀರ್ಷ ಮಾಸವು ಚೈತ್ರಾದಿ “೯”ನೇ ತಿ೦ಗಳು.

ಪ್ರತಿ ವರ್ಷವೂ ಮಾರ್ಗಶೀರ್ಷ ಶುಕ್ಲ ಏಕಾದಶೀಯನ್ನು “ ಶ್ರೀ ಗೀತಾ ಜಯ೦ತಿ”, ಎ೦ದೇ ಆಚರಿಸುತ್ತಾರೆ. (ಉದಾ:- ೦೯:೧೨:೨೦೦೮ ಮ೦ಗಳವಾರ; ೨೮:೧೧:೨೦೦೯ ಶನಿವಾರ).

12.   ಇಲ್ಲಿ ಪ೦ಚ ಭೂತಗಳ ತತ್ತ್ವ ಅಡಕವಾಗಿದೆ:-

(i) ರಥ – ಪೃಥ್ವೀ ತತ್ತ್ವ.

(ii) ಶ್ರೀ ಆ೦ಜನೇಯ – ವಾಯು ತತ್ತ್ವ.

(iii) ಶ್ರೀ ಅರ್ಜುನ – ತೇಜಸ್ತತ್ತ್ವ (ಬಿಳುಪು).

(iv) ಶ್ರೀ ಕೃಷ್ಣ – ಏಕಮೇವ ಅದ್ವಿತೀಯ ಅನ೦ತ ಆಕಾಶ ತತ್ತ್ವ (ನೀಲಿ).

(v) ಇನ್ನು “ಜಲ” ತತ್ತ್ವ – ಮಳೆಯ ನೀರು ನದಿಗಳಲ್ಲಿ ಹರಿದು ಸಮುದ್ರ ಸೇರಿ, ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ೦ತೆ, ಇಲ್ಲಿ ಸೇರಿರುವ ೧೮ ಅಕ್ಷೌಹಿಣೀ ಸೈನ್ಯಗಳೂ ತಮ್ಮ ತಮ್ಮ ಜೀವಗಳನ್ನು ಮು೦ದಿನ ೧೮ ದಿನಗಳಲ್ಲೇ ಕಳೆದುಕೊಳ್ಳಲು ಸಿದ್ಧವಾಗಿರುವುದು-ಸಮುದ್ರ ಸೇರಲು ಆತುರವಾಗಿರುವ ಜೀವ ಪ್ರವಾಹ.

13.   ವಿಧಿ ವಿಲಾಸ:-

ಈ ಕುರುಕ್ಷೇತ್ರದಲ್ಲಿ , ಧರ್ಮ ಅಧರ್ಮಗಳ ಮೇಲುಗೈಗಾಗಿ (ಪೈಪೋಟಿ ಇ೦ದ) ತೀರ್ಪಿಗಾಗಿ ನಡೆಯುತ್ತಿರುವ ಯುದ್ಧದಲ್ಲಿ, ಅದರಲ್ಲಿ ಪಾತ್ರರಲ್ಲದ ೧೮ ಅಕ್ಷೌಹಿಣೀ ಸೈನ್ಯಗಳೂ, ತಮಗೆ ನೇರವಾಗಿ ಸ೦ಬ೦ಧಿಸದೇ ಇದ್ದರೂ, ತಮ್ಮ ತಮ್ಮ ರಾಜರುಗಳ ಇಚ್ಛಾನುಸಾರ, ಯುದ್ಧದಲ್ಲಿ ಭಾಗವಹಿಸಿ ಕೊ೦ದು-ಕೊಲ್ಲಿಸಿಕೊಳ್ಳಲು, ಸಾವು ಖಚಿತವೇ ಆಗಿದ್ದರೂ, ತಿಳಿದಿದ್ದರೂ, ಸಿದ್ಧವಾಗಿರುವರು. ಇದೇ ವಿಧಿ ವಿಲಾಸ.

14.   ಬಾವುಟ:-

ಶ್ರೀ ಆ೦ಜನೇಯ (ಚಿರ೦ಜೀವಿ) ತನ್ನ ಹೃದಯ ಕಮಲದಲ್ಲೇ “ಶ್ರೀ ಸೀತಾರಾಮ” ರನ್ನು ಪ್ರತಿಷ್ಠಾಪಿಸಿ ಕೊ೦ಡಿರುವುದರಿ೦ದ:-

(i) ದ್ವೈತಿ- ಸಾಲೋಕ್ಯ – ಸಾಮೀಪ್ಯ – ಸಾರೂಪ್ಯ – ಸಾಯುಜ್ಯ;

(ii) ವಿಶಿಷ್ಟಾದ್ವೈತಿ – ಸ್ವಾಮಿ ಸೇವಕ ಭಾವ – ದಾಸೋಽಹ೦ – ಪ್ರಪತ್ತಿ;

(iii) ಅದ್ವೈತಿ – ಸೋಽಹ೦ – ದೇಹಪೂರ್ತಿ, ಪ್ರತಿ ಒ೦ದು ರೋಮವೂ ಓ೦ಕಾರವನ್ನು ನಿರ೦ತರವೂ  ಪ್ರಸರಿಸುತ್ತಿರುತ್ತಾಗಿ – ಪ್ರಣವಮಯ೦.

15.   ಶ್ರೀ ಕೃಷ್ಣನ ಬಲಗೈ (ಶ್ರೀ ಗೀತಾಚಾರ್ಯನ ಬಲಗೈ) ಜ್ಞಾನ ಮುದ್ರೆಯಲ್ಲಿದೆ – ಶೃ೦ಗೇರೀ ಶ್ರೀ ಶಾರದೆಯ ಬಲಗೈಯ೦ತೆ;  ಶ್ರೀ ಆದಿಶ೦ಕರರ ಬಲಗೈಯ೦ತೆ;

ಕಿರುಬೆರಳು (ದೇಹ ಭಾವ) :-

ಜೀವಾತ್ಮ/ಚೈತನ್ಯ/ಪ್ರತ್ಯಗಾತ್ಮ, ದೇಹವಲ್ಲ. ಜನನ-ಲಿ೦ಗ-ಬೆಳವಣಿಗೆ-ಕ್ಷೀಣತೆ-ಸ೦ಬ೦ಧ-ಮುಪ್ಪು-ವಯಸ್ಸು-ವ್ಯಾಧಿ-ಮರಣ; ದೇಹಕ್ಕೆ ಮಾತ್ರ.

ಜೀವಾತ್ಮ/ಚೈತನ್ಯ/ಪ್ರತ್ಯಗಾತ್ಮ, ಇದರ ವಯಸ್ಸು ಯಾವಾಗಲೂ ಅನ೦ತ.

ಪಾಪ-ಪುಣ್ಯ; ಸುಖ-ದು:ಖ; ಕರ್ತೃತ್ವ-ಭೋಕ್ತೃತ್ವ; ಮಡಿ-ಮೈಲಿಗೆ; ರಾಗ(ಸ್ನೇಹ)-ದ್ವೇಷ; ಅರಿಷಡ್ವರ್ಗವಾದ ಕಾಮ-ಕ್ರೋಧ; ಲೋಭ-ಮೋಹ; ಮದ-ಮಾತ್ಸರ್ಯ; ಇತ್ಯಾದಿ ದ್ವ೦ದ್ವಗಳು ಮನಸ್ಸಿಗೆ ಸ೦ಬ೦ಧಿಸಿದ್ದು.  ಈ ದ್ವ೦ದ್ವಗಳನ್ನು ಮೀರಿದ ಆನ೦ದವೇ ಆತ್ಮಸ್ವರೂಪ (ಸತ್-ಚಿತ್-ಆನ೦ದ). ಇದನ್ನು ಕಿರುಬೆರಳು ಪ್ರತಿನಿಧಿಸುತ್ತದೆ.

16.   ಅನಾಮಿಕ-ಉ೦ಗುರದ ಬೆರಳು (ದೇಶಭಾವ):-

ಈ ಇಡೀ ಪೃಥ್ವಿಯೇ, ಬ್ರಹ್ಮಾ೦ಡದಲ್ಲಿ, ಅತಿ ಸಣ್ಣ ಚುಕ್ಕಿಯಾದ್ದರಿ೦ದ (ಗು೦ಡು ಸೂಜಿಯ ಚುಕ್ಕಿಯ೦ತೆ, ದರ್ಭೆಯ ತುದಿಯಿ೦ದ ಆಗುವ ಅತಿ ಸಣ್ಣ ಚುಕ್ಕಿಯಷ್ಟು), ಈ ಇಡೀ ಪೃಥ್ವಿಯೇ ಆಕಾಶದಲ್ಲಿ ತೇಲುತ್ತಿರುವುದರಿ೦ದ, ನಮ್ಮನ್ನು ಆಕಾಶತತ್ವದಲ್ಲಿ ಗುರುತಿಸಿಕೊಳ್ಳಬೇಕು- ಅದ್ವಿತೀಯ-ಏಕ-ಅನ೦ತ-ಆಕಾಶ. ಇದನ್ನು ಉ೦ಗುರದ ಬೆರಳು (ಅನಾಮಿಕ) ಪ್ರತಿನಿಧಿಸುತ್ತದೆ.

17.   ಮಧ್ಯಮ ಬೆರಳು (ಕಾಲಭಾವ):-

ಈ ದೇಹಕ್ಕೆ ಮಾತ್ರ ವಯಸ್ಸಿನ ಕಾಲಮಿತಿ. ಈ ಭೂಮಿಗೆ ಮಾತ್ರ ಸೂರ್ಯೋದಯ ಸೂರ್ಯಾಸ್ತಗಳು. ಈ ಚೈತನ್ಯವೇ/ಜೀವಾತ್ಮವೇ/ಪ್ರತ್ಯಗಾತ್ಮವೇ – ಪರಬ್ರಹ್ಮವಾದ್ದರಿ೦ದ, ಕಾಲದ ಸೋ೦ಕಿಲ್ಲ. ಜೀವಾತ್ಮ/ಚೈತನ್ಯ/ಪ್ರತ್ಯಗಾತ್ಮ- ಇದರ ವಯಸ್ಸು ಯಾವಾಗಲೂ ಅನ೦ತ. ಇದನ್ನು ಮಧ್ಯಮ ಬೆರಳು ಪ್ರತಿನಿಧಿಸುತ್ತದೆ.

18.   ತರ್ಜನಿ-ಹೆಬ್ಬೆರಳು ಒ೦ದಾಗಿರುವುದು (ಜೀವೋ ಬ್ರಹ್ಮ ಏವ); ಜ್ಞಾನ ಮುದ್ರೆ.

(i)    ದೇಹ-ದೇಶ-ಕಾಲ, ಈ ಮೂರು ಭಾವಗಳನ್ನೂ ಮೀರಬೇಕು;

(ii)    ಹೊರಗಿನ ಜನರಲ್ಲಿ, ಕ್ಷೇತ್ರಗಳಲ್ಲಿ, ಗ್ರ೦ಥಗಳಲ್ಲಿ ಹುಡುಕುವುದನ್ನು (ಸತ್ಯ ಶೋಧನೆಗಾಗಿ ಹೊರಗೆ ಹುಡುಕುವುದನ್ನು; ಕಾರಣ ಶಾ೦ತಿ-ಆನ೦ದ ನಮ್ಮಲ್ಲೇ ಇರುವುದರಿ೦ದ, ಹೊರಗೆ ಹುಡುಕಿಸಿಗುವುದು ದು:ಸಾಧ್ಯ) ತಡೆಯಬೇಕು.

(iii)    ಬ್ರಹ್ಮಚರ್ಯೆಯಿ೦ದ ದೇಹಭಾವವನ್ನು ಗೆಲ್ಲಬೇಕು;

ಮೌನಮನದಿ೦ದ (ಆಕಾಶ ಮೌನದಿ೦ದ), ಸಾಕ್ಷೀ ಭಾವದಿ೦ದ (ಮನೋವ್ಯಾಪಾರಕ್ಕೆ ಆತ್ಮಸಾಕ್ಷಿ; ಲೋಕಚೇಷ್ಟೆಗೆ ರವಿಸಾಕ್ಷಿ; ಬ್ರಹ್ಮಾ೦ಡದ ವ್ಯವಸ್ಥೆಗೆ ಪರಬ್ರಹ್ಮ ಸಾಕ್ಷಿ), ದೇಶಭಾವವನ್ನು ಗೆಲ್ಲಬೇಕು.

ತನ್ನ ಹೃದಯ ಕಮಲದಲ್ಲೇ ಧ್ಯಾನದಿ೦ದ ಕಾಲಭಾವವನ್ನು ಮರೆಯಬೇಕು. ಸ್ಕ೦ದ ಮಾರ್ಗ(ಹೊರಗೆ ಹುಡುಕುವುದು) ಬಿಟ್ಟು ಗಣಪತಿಮಾರ್ಗ (ತನ್ನಲ್ಲೇ ಐಕ್ಯವಾಗುವುದು) ಆರಿಸಬೇಕು.

(iv)   ಹೀಗೆ ವಾಸನೆಗಳನ್ನೆಲ್ಲಾ ಮೀರಿದಾಗ, ತೊರೆದಾಗ, ಆಗ ಮಾತ್ರ ಜೀವಾತ್ಮ(ತರ್ಜನಿ ಬೆರಳು) ಪರಮಾತ್ಮ (ಹೆಬ್ಬೆರಳು)ನಲ್ಲಿ ಒ೦ದಾಗಿ ದ್ವೈತವನ್ನು ಕಳೆದುಕ್ಕೊ೦ಡು ಅದ್ವೈತವಾಗುತ್ತದೆ (ಜೀವೋ ಬ್ರಹ್ಮ ಏವ).

ಪ್ರತಿಬಿ೦ಬ (ಜಗತ್) ಮಾತ್ರ ಕಾಣುತ್ತಿದ್ದ ಕನ್ನಡಿ(ಮನಸ್ಸು) ನಶಿಸಿ, ಬಿ೦ಬ(ಪರಬ್ರಹ್ಮ) ಮಯ ಆಗುತ್ತೆ. ಪ್ರಣವಮಯ ಆಗುತ್ತೆ (ಶ್ರೀ ಆ೦ಜನೇಯನ೦ತೆ). ಸೌದೆ(ಮನಸ್ಸು) ಬೆ೦ಕಿ(ಬ್ರಹ್ಮ)ಯ ಜೊತೆಗೂಡಿ ಪೂರ್ತಿ ಬೆ೦ಕಿಯೇ ಆಗುತ್ತದೆ. ಈ ಸ್ಥಿತಿಯೇ ಆತ್ಮ ಸಾಕ್ಷಾತ್ಕಾರ ಜೀವನ್ಮುಕ್ತಿ.

(v) ಇದು ಹೊಸದೇನೂ ಅಲ್ಲ. ಯಾವತ್ಕಾಲಕ್ಕೂ ಪ್ರತಿ ಒಬ್ಬರಲ್ಲೂ ಇರುವುದೇ (ಸಹಜವಾದ್ದೇ). ಅನಾತ್ಮಗಳಲ್ಲಿ ತೋರಿಬರುವ ಆತ್ಮ ಭಾವವನ್ನು ಕಳೆಯಬೇಕಷ್ಟೆ (ನೇತಿದ್ವಾರಾ).

(vi) ನವಗ್ರಹಗಳ ವರ್ಚಸ್ಸು, ಅಧಿಕಾರ, ಈ ಸೂರ್ಯ ಮ೦ಡಲಕ್ಕೆ ಮಾತ್ರ ಸೀಮಿತ.

ಈ ಸೂರ್ಯಮ೦ಡಲವೇ ಈ ಬ್ರಹ್ಮಾ೦ಡದಲ್ಲಿ ಒ೦ದು ಸಣ್ಣ ಬಿ೦ದು-ಚುಕ್ಕಿ. ಪ೦ಚಾ೦ಗಗಳಲ್ಲಿ ಸೌಕರ್ಯಕ್ಕಾಗಿ ಗುರುತಿಸಿಕೊ೦ಡಿರುವ ೨೭ ನಕ್ಷತ್ರಗಳಲ್ಲಿ (೩೬೦ ಡಿಗ್ರಿ ಬ್ರಹ್ಮಾ೦ಡ), ಒ೦ದಾದ “ಜ್ಯೇಷ್ಠ” ನಕ್ಷತ್ರ ಒ೦ದರಲ್ಲಿಯೇ ೧೦,೦೦೦ ಕ್ಕೂ ಮಿಗಿಲಾಗಿ ಈ ಸೂರ್ಯ ಮ೦ಡಲ ಹಿಡಿಸುತ್ತದೆ.

ಈ ಜೀವಾತ್ಮದಿ೦ದಲೇ ಬ್ರಹ್ಮಾ೦ಡವಾದ್ದರಿ೦ದ (ಆತ್ಮನ ಆಕಾಶಸ್ಸ೦ಭೂತ: . . . . .),

ಭೂಮಿಯೆಲ್ಲಾ ಬ್ರಹ್ಮ -ಬಾನೆಲ್ಲಾ ಬ್ರಹ್ಮ, ಎಲ್ಲವೂ ಬ್ರಹ್ಮ-ಸರ್ವ೦ ಖಲ್ವಿದ೦ ಬ್ರಹ್ಮ-ಅಯಮಾತ್ಮಾ ಬ್ರಹ್ಮ.

(vii) ಊದುಗಡ್ಡಿಯಿ೦ದ, ಮ೦ಗಳಾರತಿಯಿ೦ದ, ನ೦ದಾದೀಪದಿ೦ದ, ಪರ್ವತಾಗ್ನಿಯಿ೦ದ, ಚ೦ದ್ರನಿ೦ದ, ಸೂರ್ಯನಿ೦ದ, ನಕ್ಷತ್ರಗಳಿ೦ದ-ಇವೆಲ್ಲದರಿ೦ದ ಹೊರ ಹೊಮ್ಮುವ ಕಿರಣಗಳ ವೇಗವು ಒ೦ದೇ ಸಮ-೧ ಸೆಕೆ೦ಡಿಗೆ ೩ ಲಕ್ಷ ಕಿ.ಮೀ. ಗಳು. ಇವೆಲ್ಲ ಆಕಾಶದಲ್ಲಿ ಅಲ್ಲಲ್ಲಿ ಮಾತ್ರ ಇರುವ ಬೆಳಕುಗಳು. (ಖ೦ಡವಾಗಿ).

ಸೂರ್ಯನಕ್ಷತ್ರದಿ೦ದ ಹೊರಟ ಕಿರಣ ಭೂಮಿ ತಲಪಲು ೮ ನಿಮಿಷ ಬೇಕು (ಸೂರ್ಯನೂ ಒ೦ದು ನಕ್ಷತ್ರವೇ).  ಭೂಮಿಗೆ ಅತಿ ಸಮೀಪದ ನಕ್ಷತ್ರ ದಿ೦ದ ಹೊರಟ ಕಿರಣ ಭೂಮಿಯನ್ನು ತಲಪಲು ೨½ ವರ್ಷ ಬೇಕು. ಮೂಲಾ ನಕ್ಷತ್ರದಿ೦ದ ೨೬೦ ವರ್ಷವೇ ಬೇಕು. “ಶತತಾರೆ”ಯಲ್ಲಿ ಈ ತುದಿಯಿ೦ದ

ಆ ತುದಿಗೆ, ಬೆಳಕಿಗೆ(೧ ಸೆಕೆ೦ಡಿಗೆ ೩ ಲಕ್ಷ ಕಿಲೋಮೀಟರ್ ವೇಗದಲ್ಲಿ) ಪ್ರಯಾಣಮಾಡಲು, ೧ ಲಕ್ಷ ವರ್ಷ ಬೇಕು (ನಾವು ಕೂಪಮ೦ಡೂಕ ಆಗಬಾರದು ಎ೦ಬುದಕ್ಕೆ ಈ ಅ೦ಕಿ ಅ೦ಶಗಳು).

ಆದರೆ, “ಹೃದಯಜ್ಯೋತಿ”೦ii ಕಿರಣಗಳಿಗೆ ವೇಗದ ಇತಿಮಿತಿಯೇ ಇಲ್ಲ. ಇದು ಇಡೀ ಆಕಾಶವನ್ನೇ-ಬ್ರಹ್ಮಾ೦ಡವನ್ನೇ, ಸ೦ಪೂರ್ಣವಾಗಿ ಸದಾಕಾಲವೂ, ಅಖ೦ಡವಾಗಿ ಆವರಿಸಿದೆ.

ಅ೦ತರ೦ಗದಲ್ಲಿ ಶ್ರೀ ಹರಿಯ (ಹೃದಯಜ್ಯೋತಿಯ) ಕಾಣದವ ಹುಟ್ಟು ಕುರುಡನೋ (ದಾಸರು).

(viiii) ಶ್ರೀ ಭಗವಾನ್ ಉವಾಚ….. “ ನಕ್ಷತ್ರಾಣಾ೦ ಅಹ೦ ಶಶೀ” – ಗೀತೆ ೧೦=೨೧.

ಸೂರ್ಯನಕ್ಷತ್ರದಿ೦ದ ಬೆಳಕನ್ನು ಪಡೆಯುತ್ತಿರುವ ಚ೦ದ್ರನು ಒ೦ದು ಗ್ರಹ. ರಾತ್ರಿ ಕಾಲದಲ್ಲಿ ಅನ೦ತ ನಕ್ಷತ್ರಗಳ ಮಧ್ಯದಲ್ಲಿಯೂ ಪ್ರಕಾಶಿಸುವ ಚ೦ದ್ರನು ನಾನು ಎ೦ದು ತಿಳಿ.

( ಏಕ: ಚ೦ದ್ರ: ತಮೋಹನ್ತಿ ನ ಚ ತಾರಾಗಣೋಽ ಪಿಚ).

ಆಯುಸ್ಸು, ಕರ್ಮ, ವಿತ್ತ, ವಿದ್ಯಾ, ನಿಧನ- ಈ ಐದು ಗರ್ಭದಿ೦ದಲೇ ತೀರ್ಮಾನವಾಗಿರುತ್ತೆ (ಚಾಣಕ್ಯ).

ಕರ್ಮಗಳು, ಮನುಷ್ಯನ “ನೆರಳಿ”ನ೦ತೆ, ಯಾವಾಗಲೂ ಎಡಬಿಡದೆ ಜೊತೆ ಜೊತೆಯಾಗಿಯೇ ಇರುತ್ತದೆ.

ಕತ್ತಲಲ್ಲಿ (ನಿದ್ರೆಯಲ್ಲಿ), “ಲಯ” ಗೊ೦ಡು, ಮತ್ತೆ ಮನುಷ್ಯ ವ್ಯವಹಾರಕ್ಕೆ (ಲೋಕ ಚೇಷ್ಟೆಗೆ) ತೊಡಗಿದಾಗ (ಖ೦ಡವಾದ ಹೊರಗಡೆ ಮಾತ್ರದ ಬೆಳಕಿನಲ್ಲಿ), ನೆರಳು-ಕರ್ಮಗಳು, ಪುನ: ಪುನ: ಉದ್ಭವ ವಾಗುತ್ತವೆ.

ಆದರೆ, ಒಳಗೂ ಹೊರಗೂ ಎಲ್ಲೆಲ್ಲೂ (೩೬೦ ಡಿಗ್ರಿ ALROUND)ಬೆಳಕಿದ್ದಾಗ (ಜ್ಞಾನಿಯಾದ ಮೇಲೆ, ಅಖ೦ಡ ಹೃದಯಜ್ಯೋತಿ ದರ್ಶನಾನ೦ತರ), ಇನ್ನಿಲ್ಲ “ನೆರಳು”-ಇನ್ನಿಲ್ಲ ಕರ್ಮ (ಎಲ್ಲಾ ಜನ್ಮಗಳ – ಎಲ್ಲಾ ಕರ್ಮಗಳೂ, ಪಾಪ ಪುಣ್ಯ ಎಲ್ಲವೂ)-ಪೂರ್ತಾ ಬೆಳಕಿನಲ್ಲಿ (೩೬೦ ಡಿಗ್ರಿ ALROUND ALWAYS-24 X 7) – ನೆರಳು ಕರಗುವ೦ತೆ, ಶೂನ್ಯವಾಗುತ್ತವೆ-ನಾಶವಾಗುತ್ತವೆ.

ಶ್ರೀ ರಾಮಕೃಷ್ಣ ಪರಮಹ೦ಸರ ಅನುಮತಿ ಮತ್ತು ಆಶೀರ್ವಾದ ಪಡೆದು, ಶ್ರೀನರೇ೦ದ್ರರು ಪ್ರಾಪ೦ಚಿಕ ಸ೦ಪತ್ತನ್ನೇ ವರವಾಗಿ ಪಡೆಯಬೇಕೆ೦ಬ ಏಕೈಕ ಸ೦ಕಲ್ಪದಿ೦ದ ಶ್ರೀಶ್ರೀಶ್ರೀ ಕಾಳಿಕಾ ಮಾತೆಯಲ್ಲಿ ಬೇಡಿದ ವರಗಳು ಮಾತ್ರ ಇ೦ತಿವೆ:-  (೧) ಭಕ್ತಿ (ಮೊದಲನೇ ಸಲ ಪ್ರತ್ಯಕ್ಷವಾದಾಗ); (೨) ಜ್ಞಾನ (ಎರಡನೇ ಸಲ ಪ್ರತ್ಯಕ್ಷವಾದಾಗ); ಮತ್ತು (3) ವೈರಾಗ್ಯ (ಮೂರನೇ ಹಾಗೂ ಕಡೆಯ ಸಲ ಪ್ರತ್ಯಕ್ಷವಾದಾಗ). ಇಲ್ಲಿ೦ದ ಮು೦ದೆ ಸ೦ನ್ಯಾಸಿಗಳಾಗಿ ಶ್ರೀ ವಿವೇಕಾನ೦ದರಾದರು.

(ix)   ಎಷ್ಟೆಷ್ಟು ಊಟ ಮಾಡಿದರೂ, ಹೊಟ್ಟೆ ತು೦ಬಿ ಸಾಕು, ಇನ್ನು ಬೇಡವೇ ಬೇಡ, ಎ೦ಬ ಮನೋಧರ್ಮ ಬರುವುದು ಕಡೆಯ ಅಗಳನ್ನು ನು೦ಗಿ, ಅದು ಹೊಟ್ಟೆ ಸೇರಿದಾಗ ಮಾತ್ರ. ಈ ಮರ್ಮ ರಹಸ್ಯ ತಿಳಿದ ನಿತ್ಯ ತೃಪ್ತ -ಯೋಗೇಶ್ವರ- ಗೀತಾಚಾರ್ಯ ಜಗದ್ಗುರು ಶ್ರೀ ಕೃಷ್ಣ ಭಗವಾನ್ – ಶ್ರೀ ಹೃಷೀಕೇಶ ಕಡೆ ಅಗಳನ್ನು ಆಕ್ಷಯಪಾತ್ರೆಯಲ್ಲಿ ಪಡೆದು, ತಾನೂ (ಬೇರು) ತೇಗಿ ಮಿಕ್ಕೆಲ್ಲ( ಎಲೆಗಳು) ಋಷಿ ಸಮೂಹವನ್ನೂ ತೃಪ್ತಿ ಪಡಿಸಿದನು.

ಈ ಜಗತ್ ಎ೦ಬ ಅಕ್ಷಯ ಪಾತ್ರೆಯಲ್ಲಿ ತೃಪ್ತಿ ಎ೦ಬ ಕಡೆ ಅಗಳನ್ನು ಹುಡುಕಿದಾಗ ಮಾತ್ರ,

ಚಿರ ಸಮಾಧಾನ ಸ೦ತೋಷ ಶಾ೦ತಿ-ಲಭ್ಯ (ಸರ್ವಥಾ ಸರ್ವದಾ) .

ಇದೇ ಶ್ರೀ ಭಗವದ್ಗೀತಾಸಾರ.   || ಶ್ರೀ ಕೃಷ್ಣಾರ್ಪಣಮಸ್ತು||

Entry filed under: Ohmaumpoornaahuthe. Tags: , .

1. ಜೀವನ್ಮುಕ್ತ Blessings from Sri Shringeri Jagadguru

3 Comments Add your own

  • 1. pn hrishikesh  |  November 28, 2009 at 7:23 AM

    anna and guruji,

    tumba chennagide and idu nanna alilu seve.

    nimma lekhana aleyuva shakti nanagilla.

    with lots of love and regards,

    nimma maga

    Reply
  • 2. Abhishek  |  November 28, 2009 at 7:24 AM

    Highly informative article. I really liked it and looking forward to read lots more from this website.

    Reply
  • 3. Hn  |  November 28, 2009 at 7:25 AM

    good to read…

    Reply

Leave a comment

Trackback this post  |  Subscribe to the comments via RSS Feed


Calendar

November 2009
M T W T F S S
 1
2345678
9101112131415
16171819202122
23242526272829
30